Media Room / Business

ಮಂಗಳೂರು ರೈಲು ಜಾಲ ಮೈಸೂರು ವಿಭಾಗಕ್ಕೆ ಸೇರ್ಪಡೆ; ದ.ಕ.ದ ಬಹುಕಾಲದ ಬೇಡಿಕೆ ಈಡೇರಿಕೆ

ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರ ಸತತ ಪ್ರಯತ್ನಕ್ಕೆ ಬಹುದೊಡ್ಡ ಯಶಸ್ಸು

ಮಂಗಳೂರು: ದಕ್ಷಿಣ ರೈಲ್ವೆ ವಲಯದ ವ್ಯಾಪ್ತಿಯಲ್ಲಿರುವ ಮಂಗಳೂರು ಭಾಗದ ರೈಲ್ವೆ ಜಾಲವನ್ನು ನೈಋತ್ಯ ರೈಲ್ವೆ ವಲಯಕ್ಕೆ ಒಳಪಟ್ಟ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸುವುದಕ್ಕೆ ರೈಲ್ವೆ ಸಚಿವಾಲಯದಿಂದ ಒಪ್ಪಿಗೆ ಲಭಿಸಿದ್ದು, ಶೀಘ್ರ ಗೆಜೆಟೆಡ್ ನೋಟಿಫಿಕೇಶನ್ ಹೊರಬೀಳಲಿದೆ. ಇದರೊಂದಿಗೆ, ದಕ್ಷಿಣ ಕನ್ನಡ ಜನರ ಬಹು ವರ್ಷಗಳ ಬಹುದೊಡ್ಡ ರೈಲ್ವೆ ಬೇಡಿಕೆ ಈಡೇರುತ್ತಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಈ ಐತಿಹಾಸಿಕ ತೀರ್ಮಾನದ ಬಗ್ಗೆ ಪ್ರತಿಕ್ರಿಯಿಸಿರುವ ಕ್ಯಾ. ಚೌಟ ಅವರು, ಮಂಗಳೂರು ಭಾಗದ ರೈಲ್ವೆ ಸಂಪರ್ಕ ಜಾಲವು ಸದ್ಯ ದಕ್ಷಿಣ ರೈಲ್ವೆ ವ್ಯಾಪ್ತಿಯ ಪಾಲ್ಘಾಟ್‌ ವಿಭಾಗ ಹಾಗೂ ನೈಋತ್ಯ ರೈಲ್ವೆ ವಲಯ ವ್ಯಾಪ್ತಿಯ ಮೈಸೂರು ವಿಭಾಗದೊಂದಿಗೆ ಹಂಚಿಕೊಂಡಿದೆ. ಇದರಿಂದ ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ, ಹೊಸ ರೈಲುಗಳ ಅಳವಡಿಕೆ ಸೇರಿ ನಾನಾ ಸಂದರ್ಭದಲ್ಲಿ ಸಾಕಷ್ಟು ಆಡಳಿತಾತ್ಮಕ ಸಮಸ್ಯೆ-ಸವಾಲುಗಳು ಎದುರಾಗುತ್ತಿದ್ದವು. ಹೀಗಾಗಿ, ಮಂಗಳೂರು ಭಾಗದ ಪೂರ್ತಿ ರೈಲು ವ್ಯಾಪ್ತಿಯನ್ನು ದಕ್ಷಿಣ ರೈಲ್ವೆಯಿಂದ ಪ್ರತ್ಯೇಕಿಸಿ ನೈಋತ್ಯ ವಲಯಕ್ಕೆ ಸೇರ್ಪಡೆಗೊಳಿಸಬೇಕೆಂಬುದು ಈ ಭಾಗದ ಜನರ ಬಹು ವರ್ಷಗಳ ಪ್ರಮುಖ ಬೇಡಿಕೆಯಾಗಿತ್ತು. ಇದೀಗ ಮಂಗಳೂರು ಭಾಗವನ್ನು ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸಿ ಬಹುಕಾಲದ ಬೇಡಿಕೆ ಹಾಗೂ ಈ ಭಾಗದ ಜನರ ಕನಸನ್ನು ರೈಲ್ವೆ ಸಚಿವಾಲಯವು ನನಸಾಗಿಸಿರುವುದು ಸಂಸದನಾಗಿ ಬಹಳ ಸಂತಸ ತಂದಿದೆ ಎಂದು ಕ್ಯಾ.ಚೌಟ ಹೇಳಿದ್ದಾರೆ.

2024ರಲ್ಲಿ ಸಂಸದನಾಗಿ ಅಧಿಕಾರ ವಹಿಸಿಕೊಂಡ ಕೂಡಲೇ ಮಂಗಳೂರು ಭಾಗದ ರೈಲ್ವೆ ಅಭಿವೃದ್ಧಿಗೆ ಬಹುದೊಡ್ಡ ಸವಾಲಾಗಿದ್ದ ಈ ವ್ಯಾಪ್ತಿ ಸಮಸ್ಯೆ ಸರಿಪಡಿಸುವ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಆದ್ಯತೆ ಮೇರೆಗೆ ಎಲ್ಲ ರೀತಿಯ ಪ್ರಯತ್ನ ಆರಂಭಿಸಿದ್ದೆ. ಈ ವಿಚಾರವನ್ನು ಮೊದಲು ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರ ಗಮನಕ್ಕೆ ತಂದು, ಲಭ್ಯವಿದ್ದ ಎಲ್ಲಾ ಸಂಸದೀಯ ಮತ್ತು ಸಾಂಸ್ಥಿಕ ವೇದಿಕೆಗಳಲ್ಲೂ ಈ ಬಗ್ಗೆ ಧ್ವನಿ ಎತ್ತುವ ಪ್ರಯತ್ನ ಮಾಡಲಾಗಿತ್ತು. ರೈಲ್ವೆ ರಾಜ್ಯ ಖಾತೆ ಸಚಿವರಾಗಿದ್ದ ವಿ. ಸೋಮಣ್ಣ ಅವರು ಮಂಗಳೂರಿಗೆ ಬಂದಿದ್ದ ಸಂದರ್ಭದಲ್ಲಿಯೂ ಪ್ರತ್ಯೇಕ ಸಭೆ ನಡೆಸಿ ಈ ಬಗ್ಗೆ ಸುಧೀರ್ಘ ಚರ್ಚೆ ನಡೆಸಿ ಅವರ ಗಮನಕ್ಕೂ ಸಮಸ್ಯೆ ಗಂಭೀರತೆಯನ್ನು ಮನವರಿಕೆ ಮಾಡಲಾಗಿತ್ತು. ಅದಾದ ಬಳಿಕ ಲೋಕಸಭೆಯಲ್ಲಿಯೂ ವಿವಿಧ ವಲಯಗಳಲ್ಲಿ ಹಂಚಿಕೊಂಡಿರುವ ಮಂಗಳೂರು ರೈಲ್ವೆ ಜಾಲವನ್ನು ನೈಋತ್ಯ ವಲಯಕ್ಕೆ ಸೇರಿಸಬೇಕೆಂದು ಸದನದಲ್ಲಿ ರೈಲ್ವೆ ಸಚಿವರನ್ನು ಒತ್ತಾಯಿಸಲಾಗಿತ್ತು. ಅದರಂತೆ ಕಳೆದ ಎರಡು ವರ್ಷಗಳಿಂದ ರೈಲ್ವೆ ಸಚಿವಾಲಯ ಹಾಗೂ ಇಲಾಖೆಗಳೊಂದಿಗೆ ನಡೆಸಿದ್ದ ನಿರಂತರ ಫಾಲೋಅಪ್‌ ಹಾಗೂ ಪ್ರಯತ್ನಕ್ಕೆ ಈಗ ಫಲ ಸಿಕ್ಕಿದೆ ಎಂದು ಕ್ಯಾ. ಚೌಟ ಅವರು ಬಹಳ ಹರ್ಷ ವ್ಯಕ್ತಪಡಿಸಿದ್ದಾರೆ.

ಮಂಗಳೂರಿನ ಮಟ್ಟಿಗೆ ಇದೊಂದು ಐತಿಹಾಸಿಕ ಹೆಜ್ಜೆಯಾಗಲಿದೆ. ಈ ಬದಲಾವಣೆಯಿಂದಾಗಿ ಮಂಗಳೂರು ರೈಲ್ವೆ ವ್ಯಾಪ್ತಿಯ ಆಡಾಳಿತಾತ್ಮಕ ಗೊಂದಲ ನಿವಾರಣೆಯಾಗಿ ರೈಲ್ವೆ ಅಭಿವೃದ್ಧಿ ವಿಚಾರಗಳಲ್ಲಿ ಹೆಚ್ಚಿನ ಅನುಕೂಲತೆ ಹಾಗೂ ತ್ವರಿತ ನಿರ್ಧಾರಗಳು ಆಗಲಿದೆ. ಇಲಾಖೆಗಳ ನಡುವಿನ ಸಮನ್ವಯತೆ ಕೂಡ ಹೆಚ್ಚಲಿದ್ದು, ಪ್ರಯಾಣಿಕರ ಕುಂದುಕೊರತೆಗಳ ಶೀಘ್ರ ವಿಲೇವಾರಿ ಹಾಗೂ ಕರಾವಳಿ ಭಾಗದ ರೈಲ್ವೆ ಮೂಲಸೌಕರ್ಯ ವಿಸ್ತರಣೆಗೆ ಮತ್ತು ಸಂಪರ್ಕದ ಅಭಿವೃದ್ಧಿಗೂ ಇದು ಐತಿಹಾಸಿಕ ಹೆಜ್ಜೆಯಾಗಲಿದೆ ಎಂದು ಸಂಸದರು ವಿವರಿಸಿದ್ದಾರೆ.

ದಕ್ಷಿಣ ಕನ್ನಡ ಜನರ ಪಾಲಿಗೆ ಬಹು ವರ್ಷಗಳಿಂದ ಈಡೇರದೆ ಬಾಕಿಯಾಗಿದ್ದ ಈ ಬೇಡಿಕೆಗೆ ಸ್ಪಂದಿಸಿ ಮಂಗಳೂರು ರೈಲ್ವೆ ಪ್ರದೇಶವನ್ನು ಕೇರಳದ ವ್ಯಾಪ್ತಿಯ ದಕ್ಷಿಣ ರೈಲ್ವೆ(ಪಾಲ್ಘಾಟ್‌ ವಿಭಾಗ)ಯಿಂದ ಬೇರ್ಪಡಿಸಿ ನೈಋತ್ಯ ರೈಲ್ವೆ ವಲಯಕ್ಕೆ ಒಳಪಟ್ಟ ಮೈಸೂರು ವಿಭಾಗಕ್ಕೆ ಸೇರಿಸುವ ಈ ಮಹತ್ವದ ನಿರ್ಧಾರ ಕೈಗೊಂಡ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರಕ್ಕೆ, ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಹಾಗೂ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರಿಗೆ ಜಿಲ್ಲೆಯ ಜನತೆಯ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ಸಂಸದ ಕ್ಯಾ. ಚೌಟ ಅವರು ತಿಳಿಸಿದ್ದಾರೆ

From the Media Room. Managed by the media Team of MP Captain Brijesh Chowta

KEEP READING

More from the media room

Capt. Chowta thanks Ashwini Vaishnaw

Reported by The Hindu · 02 Sep 2026 This story was originally reported by The Hindu. Read the full article at the source for the complete report. Read the original...

Samsat Samvada With Captain Brijesh Chowta

‘The Budget session has ended on a productive note with a history making bill that is now a law. As a first time MP, it is greatly motivating to see...

ಕರಾವಳಿಯಲ್ಲಿ ಅಡಿಕೆ ರೋಗ ತಡೆಗೆ ಕೇಂದ್ರದಿಂದ ಬೆಂಬಲ: ಕ್ಯಾ. ಚೌಟಗೆ ಸಚಿವ ಶಿವರಾಜ್ ಚೌಹಾಣ್ ಭರವಸೆ

ನಿಯಮ 377ರ ಅಡಿಯಲ್ಲಿ ಸಂಸದರ ಮನವಿಗೆ ಸ್ಪಂದಿಸಿದ ಕೇಂದ್ರ ಕೃಷಿ ಸಚಿವರು ಮಂಗಳೂರು: ದಕ್ಷಿಣ ಕನ್ನಡ ಸೇರಿದಂತೆ ಕರ್ನಾಟಕದ ಕರಾವಳಿ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಅಡಿಕೆ ಬೆಳೆಗೆ ಬಾಧಿಸಿರುವ ಎಲೆಚುಕ್ಕಿಯಂಥಹ ವಿವಿಧ ರೋಗಗಳ ನಿಯಂತ್ರಣಕ್ಕೆ ವೈಜ್ಞಾನಿಕ ಸಂಶೋಧನೆ, ಕ್ಷೇತ್ರ ಸಮೀಕ್ಷೆ ಹಾಗೂ...