Media Room / Business

ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ನಿರಾಕರಿಸಿದ ಸಚಿವ ಜಮೀರ್ ಅಹ್ಮದ್‌;

ಆಡಳಿತ ವ್ಯವಸ್ಥೆಯನ್ನೇ ಹಾಸ್ಯಾಸ್ಪದವಾಗಿಸಿದ ಕಾಂಗ್ರೆಸ್ ಸರ್ಕಾರ -ಸಂಸದ ಕ್ಯಾ. ಚೌಟ

ಮಂಗಳೂರು: ಸಚಿವ ಸ್ಥಾನ ಹಾಗೂ ಸಂಪುಟ ದರ್ಜೆಯ ಸೌಲಭ್ಯಗಳನ್ನು ಅನುಭವಿಸಲು ಸದಾ ಮುಂಚೂಣಿಯಲ್ಲಿದ್ದ ಕಾಂಗ್ರೆಸ್ ನಾಯಕ ಜಮೀರ್ ಅಹ್ಮದ್ ಖಾನ್ ಅವರು ಸ್ವಾತಂತ್ರ್ಯ ದಿನಾಚರಣೆಯಂದು ರಾಷ್ಟ್ರ ಧ್ವಜಾರೋಹಣ ಮಾಡಲು ನಿರಾಕರಿಸಿರುವುದು ಸ್ವಾತಂತ್ರ್ಯ ಹೋರಾಟಗಾರರಿಗೆ, ದೇಶಕ್ಕೆ ಹಾಗೂ ರಾಷ್ಟ್ರಧ್ವಜಕ್ಕೆ ಮಾಡಿರುವ ಬಹುದೊಡ್ಡಅಪಮಾನ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಹಾಗೂ ದ. ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಖೇದ ವ್ಯಕ್ತಪಡಿಸಿದ್ದಾರೆ.

ವಿಜಯನಗರ ಜಿಲ್ಲೆಯಲ್ಲಿ ಸ್ವಾತಂತ್ರೋತ್ಸವದಂದು ಧ್ವಜಾರೋಹಣದ ಕರ್ತವ್ಯದಿಂದ ವಿನಾಯಿತಿ ನೀಡುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಅಧಿಕೃತವಾಗಿ ಪತ್ರ ಬರೆದಿರುವ ಸಚಿವ ಜಮೀರ್ ಅಹ್ಮದ್ ಖಾನ್ ಅವರ ನಡೆ ಹಾಗೂ ಮನಸ್ಥಿತಿಯನ್ನು ಸಂಸದರು ತೀವ್ರವಾಗಿ ಟೀಕಿಸಿದ್ದಾರೆ. ಪ್ರಮಾಣ ವಚನ ಸಂದರ್ಭದಲ್ಲಿಯೂ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸದೆ ಕನ್ನಡಿಗರಿಗೆ, ಕನ್ನಡಾಂಬೆಗೆ ಅಗೌರವ ತೋರಿದ್ದ ಸಚಿವ ಜಮೀರ್, ಇದೀಗ ಮುಂದುವರಿದು ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನಿರಾಕರಿಸುವ ಮೂಲಕ ದೇಶದ ಸಂವಿಧಾನ ಹಾಗೂ ಭಾರತ ಮಾತೆಗೆ ಅವಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೋಟ್ಯಂತರ ದೇಶಭಕ್ತರ ತ್ಯಾಗ ಮತ್ತು ಬಲಿದಾನದ ಸಂಕೇತವಾಗಿರುವ ತ್ರಿವರ್ಣ ಧ್ವಜವನ್ನು ಗೌರವಿಸುವುದು ಪ್ರತಿಯೊಬ್ಬ ಪ್ರಜೆಯ; ಅದರಲ್ಲೂ ಮುಖ್ಯವಾಗಿ ಜನಪ್ರತಿನಿಧಿಯಾಗಿರುವ ಸಚಿವರ ಮೊದಲ ಕರ್ತವ್ಯ. ಈ ದೇಶದ ಪ್ರಜೆಯಾದವರಿಗೆ ಮೊದಲು ದೇಶ, ಉಳಿದಿದೆಲ್ಲವೂ ಆ ನಂತರವೇ. ಹೀಗಿರುವಾಗ, ಒಬ್ಬ ಸಚಿವನಾಗಿ ನಾಡಿನ ಜನತೆ ಹಾಗೂ ಸಮಾಜಕ್ಕೆ ಮಾದರಿಯಾಗುವ ರೀತಿಯ ದೇಶಾಭಿಮಾನವನ್ನು ತೋರಿಸಬೇಕು. ಅದುಬಿಟ್ಟು ಕೇವಲ ಸಮಯದ ಅಭಾವ ಎಂಬ ಕುಂಟು ನೆಪವೊಡ್ಡಿ ಸ್ವಾತಂತ್ರ್ಯೋತ್ಸವ ಆಚರಣೆಯಂತಹ ರಾಷ್ಟ್ರೀಯ ಕರ್ತವ್ಯಕ್ಕೆ ಅಸಡ್ಡೆ ತೋರಿರುವುದು ದೇಶದ ಸಾರ್ವಭೌಮತ್ವಕ್ಕೆ ಎಸಗುವ ನೇರ ಅಪಚಾರವಾಗಿದೆ . ಇದಕ್ಕೆ ಪ್ರತಿಯಾಗಿ, ಸಚಿವರ ಈ ನಡೆಯನ್ನು ಖಂಡಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದ್ದ ಮುಖ್ಯಮಂತ್ರಿಯವರೂ ಕೂಡ ಅವರ ಕೋರಿಕೆಗೆ ತಕ್ಷಣವೇ ಸಮ್ಮತಿಸಿ ವಿನಾಯಿತಿ ನೀಡಿರುವುದು ತೀವ್ರ ಅಚ್ಚರಿ ಮೂಡಿಸುವಂತಿದೆ ಎಂದು ಕ್ಯಾ. ಚೌಟ ಟೀಕಿಸಿದ್ದಾರೆ.

ಸಂಪುಟ ದರ್ಜೆಯ ಸ್ಥಾನಮಾನ ಹಾಗೂ ಸೌಲಭ್ಯ ಅನುಭವಿಸಲು ಮುಂದಿರುವ ಸಚಿವರಿಗೆ, ಜಿಲ್ಲಾ ಉಸ್ತುವಾರಿ ಜವಾಬ್ದಾರಿ ವಹಿಸಿಕೊಳ್ಳಲು ಹಾಗೂ ರಾಷ್ಟ್ರಧ್ವಜಾರೋಹಣ ನೆರವೇರಿಸಲು ನೆಪಗಳನ್ನು ಹುಡುಕುವುದು ಅವರ ತೀವ್ರ ಬೇಜವಾಬ್ದಾರಿತನ ಮತ್ತು ಈ ಕಾಂಗ್ರೆಸ್ ಸರ್ಕಾರದ ಶೋಚನೀಯ ಸ್ಥಿತಿಯನ್ನು ಎತ್ತಿಹಿಡಿಯುತ್ತದೆ. ಕಾಂಗ್ರೆಸ್ ನಾಯಕರ ಈ ರೀತಿಯ ಸಾಲು-ಸಾಲು ಅಸಹ್ಯಕರ ನಡೆಯು ಪ್ರಸ್ತುತ ಸರ್ಕಾರವು ಎಷ್ಟು ಮಹಿಳಾ ವಿರೋಧಿ, ಸಂವಿಧಾನ ವಿರೋಧಿ, ಕನ್ನಡ ವಿರೋಧಿ ಹಾಗೂ ರಾಷ್ಟ್ರ ವಿರೋಧಿಯಾಗಿದೆ ಎಂಬುದಕ್ಕೆ ಸ್ಪಷ್ಟ ನಿದರ್ಶನವಾಗಿದೆ ಎಂದು ಕ್ಯಾ. ಬ್ರಿಜೇಶ್ ಚೌಟ ಅವರು ತಮ್ಮ ಹೇಳಿಕೆಯಲ್ಲಿ ಖಂಡಿಸಿದ್ದಾರೆ.

From the Media Room. Managed by the media Team of MP Captain Brijesh Chowta

KEEP READING

More from the media room

Capt. Chowta thanks Ashwini Vaishnaw

Reported by The Hindu · 02 Sep 2026 This story was originally reported by The Hindu. Read the full article at the source for the complete report. Read the original...

Samsat Samvada With Captain Brijesh Chowta

‘The Budget session has ended on a productive note with a history making bill that is now a law. As a first time MP, it is greatly motivating to see...

ಕರಾವಳಿಯಲ್ಲಿ ಅಡಿಕೆ ರೋಗ ತಡೆಗೆ ಕೇಂದ್ರದಿಂದ ಬೆಂಬಲ: ಕ್ಯಾ. ಚೌಟಗೆ ಸಚಿವ ಶಿವರಾಜ್ ಚೌಹಾಣ್ ಭರವಸೆ

ನಿಯಮ 377ರ ಅಡಿಯಲ್ಲಿ ಸಂಸದರ ಮನವಿಗೆ ಸ್ಪಂದಿಸಿದ ಕೇಂದ್ರ ಕೃಷಿ ಸಚಿವರು ಮಂಗಳೂರು: ದಕ್ಷಿಣ ಕನ್ನಡ ಸೇರಿದಂತೆ ಕರ್ನಾಟಕದ ಕರಾವಳಿ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಅಡಿಕೆ ಬೆಳೆಗೆ ಬಾಧಿಸಿರುವ ಎಲೆಚುಕ್ಕಿಯಂಥಹ ವಿವಿಧ ರೋಗಗಳ ನಿಯಂತ್ರಣಕ್ಕೆ ವೈಜ್ಞಾನಿಕ ಸಂಶೋಧನೆ, ಕ್ಷೇತ್ರ ಸಮೀಕ್ಷೆ ಹಾಗೂ...